ಮೊದಲಿಗೆ ಒಂದಿಷ್ಟು

ಇನ್ನೆರಡು ವರ್ಷಗಳಲ್ಲಿ ಅಡಿಗರ ಹುಟ್ಟಿಗೆ ನೂರು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಈ ಮಿಂದಾಣವನ್ನು ‘ಅನೇಕ’ ನಿಮ್ಮ ಮುಂದಿಡುತ್ತಿದೆ.                               

                  ಅನುಭವಕ್ಕೆ ತಕ್ಕ ಪ್ರತಿರೂಪವನ್ನು ಭಾಷೆಯಲ್ಲಿ ತಕ್ಕ ಪ್ರತಿಮೆಗಳ ಮೂಲಕ ಸಿದ್ದಗೊಳಿಸಬಲ್ಲನೇ ಕವಿ ಎನ್ನುವುದಾರೆ  ಅಡಿಗರ ಕಾವ್ಯ ಈ ಮಾತುಗಳಿಗೆ ಅನ್ವರ್ಥವಾಗಿದೆ ಎನ್ನಬಹುದು . ಮಾತಿನಲ್ಲಿನ ಹಿಡಿತ , ಅಭಿವ್ಯಕ್ತಿಯಲ್ಲಿನ ನಿಷ್ಟುರತೆ , ಓದುಗನನ್ನು ಸಂಕೀರ್ಣ ರೀತಿಯಲ್ಲಿ ಪ್ರಭಾವಿಸುವಲ್ಲಿ ಅಡಿಗರಿಗಿದ್ದ ಕಲೆ ಅವರನ್ನು ಈ ಕನ್ನಡದ ಅಗ್ರಗಣ್ಯ ಕವಿಗಳಲ್ಲೊಬ್ಬರನ್ನಾಗಿ ಮಾಡಿದೆ.

                   ಗೇಯತೆಗೊಗ್ಗುತಿದ್ದ ಅಡಿಗರ ನವೋದಯ ಕಾಲದ ಕವನಗಳು  ಮತ್ತು ವರ್ಧಮಾನದ ನಂತರದ ನೇರ ನಿರೂಪಣೆಗಿಳಿದ ಪದ್ಯಗಳು ಒಂದೆರಡು ಓದಿಗೆ ದಕ್ಕುತ್ತವಾದರೂ , ಗೇಯತೆ ತ್ಯಜಿಸಿದ ನವ್ಯ ಕಾವ್ಯದ ಸಂಕ್ರಮಣ ಘಟ್ಟದ ಅನೇಕ ಪ್ರತಿಮಾತ್ಮಕ ಕಾವ್ಯಗಳು ಇಂದಿನ ತರುಣ ಓದುಗರಿಗೆ ಕಬ್ಬಿಣದ ಕಡಲೆಯೇ . ಆದರೆ ಆಳಕ್ಕಿಳಿದು ಅರಗಿಸಿಕೊಂಡರೆ ಅವು ನೀಡುವ ಅನುಭವ ಅನನ್ಯವಾದದ್ದು . ಅಡಿಗರ “ಭೂತ” ಕವನದ ಸಾಲುಗಳು ಇದನ್ನೇ ಹೇಳುವಂತಿವೆ .

                                                               ಅಗೆವಾಗ್ಗೆ ಮೊದಲು ಕೋಶಾವಸ್ಥೆ , ಮಣ್ಣು

                                                               ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ  ಕುಕ್ಕಿದರೆ

                                                               ಕಂಡೀತು ಗೆರೆಮಿರಿವ ಚಿನ್ನದದಿರು

                         ಅಗೆದು ಆಳಕ್ಕಿಳಿದು ನೋಡಿದಾಗ ಮಾತ್ರ ಅದಿರಿನ ಪ್ರಭೆ ನಮಗೆ ಕಾಣಿಸುವುದು . ಹೀಗಾಗಿ ಅಡಿಗರ ಕಾವ್ಯ ಒಂದಷ್ಟು ಪೂರ್ವಾಭ್ಯಾಸ ಬೇಡುತ್ತದೆ . ವರ್ತಮಾನದ ಬದುಕಿನ ಧಾವಂತದಲ್ಲಿ ಈ ಪೂರ್ವಾಭ್ಯಾಸಗಳಿಗೆ ಬಿಡುವಿಲ್ಲದೆ , ಪದ್ಯ ಓದಿಗೆ ಬೇಕಾದ ಶೃದ್ದೆಯೂ ಕಡಿಮೆಯಾಗಿರುವುದರಿಂದ ಅವರ ಬಹಳಷ್ಟು ನವ್ಯದ ಪದ್ಯಗಳು ಈ ಹೊಸ ತಲೆಮಾರಿಗೆ ಮುಟ್ಟಲೇ ಇಲ್ಲ . ಆದ್ದರಿಂದ ಅವರ ಪದ್ಯಗಳ ಓದಿಗೆ ಬೇಕಾದ ಸಮರ್ಪಕ ಅಡಿಪಾಯವನ್ನು ಈ ಯೋಜನೆ ಹಾಕಿಕೊಡಬಲ್ಲುದು ಎಂಬುದು ನಮ್ಮ ಆಶಯ .

                 ಅಡಿಗ ಇಂದಿಗೆ ಎಷ್ಟು ಮುಖ್ಯವೆಂಬ ಪ್ರಶ್ನೆ . ಉತ್ತರ ಎರಡು . ಮೊದಲನೆಯದಾಗಿ ಕನ್ನಡ ಭಾಷೆಯ ಬೆಳವಣಿಗೆಗೆ ಅವರ ಕೊಡುಗೆ .  ಭಾಷೆಯ ಬಳಕೆಯ ಸಾಧ್ಯತೆಗಳನ್ನು ವಿಸ್ತರಿಸಿ , ಕಾವ್ಯದಲ್ಲಿ ಆಡುನುಡಿಗಟ್ಟಿನ ಶಬ್ದ ಲಯವನ್ನು ತಂದವರು.  ತನ್ನ ಓದಿನ ವಿಸ್ತಾರ ಹರಡಿಕೊಂಡಿದ್ದ ಪುರಾಣ , ಪಶ್ಚಿಮದ ಕೃತಿಗಳು ,ಮತ್ತು ತಮ್ಮ ಬದುಕಿನ ಸಮೀಪ ಸುಳಿದಾಡಿದ ಮತ್ತು ಭಾಗವಾಗೇ ಇದ್ದ ಹಲವು ಮೂಲಗಳಿಂದ ಪ್ರತಿಮೆಗಳನ್ನು ತಮ್ಮ ಕಾವ್ಯದಲ್ಲಿ ತರುತ್ತಾರೆ. ನಮ್ಮ ಪುರಾಣದ ಹಿರಣ್ಯ ಕಶಿಪು , ಶಿಶುಪಾಲ , ಭಸ್ಮಾಸುರ ಮೋಹಿನಿ  , ಶೇಕ್ಸ್ಪಿಯರ್  ನ  ಮ್ಯಾಕ್‌ಬೆತ್  ಹೀಗೆ ಮೂಲ ಬೇರೆ ಬೇರೆಯಾದರೂ ಅವೆಲ್ಲವೂ ಯಾವುದೇ ಆಭಾಸವೆನಿಸದಂತೆ ಸುಲಲಿತವಾಗಿ ಬೆರೆತುಕೊಳ್ಳುತ್ತವೆ . ಹಕ್ಕಿಗೊರಳು – ಜಾಮೂನು ,   ಈಡಿಪಸ್ಸು – ಟ್ರಾಕ್ಟರು ಮೊದಲಾದ ಪ್ರತಿಮೆಗಳು ಜೊತೆ ಜೊತೆಯಾಗಿ ಒಮ್ಮಿಂದೊಮ್ಮೆಗೆ ಬಂದು ಪದ್ಯ ಇನ್ನಷ್ಟು ಕಳೆಗಟ್ಟುತ್ತದೆ .  

                                                               ಈಡಿಪಸ್ಸಿನ ಗೂಢ, ಪಾಪ ಲೇಪಿತನಾನು ;

                                                               ಟ್ರಾಕ್ಟರನ್ನೇರಿದೆನು ; ಉತ್ತೆ, ಸಿಗಿದೆ

                                                                                                             – ಭೂಮಿಗೀತ                     

                                                               ಕಂಭವೊಡೆಯುವ ವರೆಗೆ, ಕುಂಭ ತುಂಬುವ ವರೆಗೆ,

                                                               ಲೆಕ್ಕ ನೂರಕ್ಕೆ ಭರ್ತಿಯಾಗುವತನಕ,

                                                               ಬಿರ್ನಮ್ ಅರಣ್ಯವೇ ಎದ್ದು ಹೊರಡುವ ತನಕ

                                                               ಮೋಹಿನಿಯ ಕೈ ತಲೆಯ ಮುಟ್ಟುವನಕ

                                                                                                                  – ದೆಹಲಿಯಲ್ಲಿ  

                   ಎರಡನೆಯದಾಗಿ ಅಡಿಗರು ಸರ್ವತ್ರ ಸ್ವೀಕಾರವಾಗಿದ್ದ ಆಧ್ಯಾತ್ಮ ಮತ್ತು ಸೌಂದರ್ಯೋಪಾಸನೆಯಲ್ಲಿಯೇ ಸಾರ್ಥಕ್ಯ ಕಂಡುಕೊಂಡಿದ್ದ , ಅಲಂಕಾರಿಕವಾದ ರೂಪಕ ಪ್ರಧಾನವಾದ ಭಾಷೆಯ ಬಳಕೆಯಿಂದ ಕನಸಿನ ಲೋಕವೊಂದನ್ನು ಸೃಷ್ಟಿಸಿ ಮೋಡಿ ಮಾಡಿದ್ದ ಕನ್ನಡ ಕಾವ್ಯಕ್ಕೆ ಭಾಷೆ ಮತ್ತು ಪ್ರತಿಮೆಗಳೆರಡರಲ್ಲೂ  ಬದುಕಿನ ನೈಜತೆಯನ್ನು ತುಂಬಿದ್ದು . ಕಾವ್ಯದಲ್ಲಿ ಮಣ್ಣಿನ ವಾಸನೆಯ ಅಗತ್ಯತೆಯನ್ನು ಅವರದೇ ಮಾತುಗಳು ಹೀಗೆ ಹೇಳುತ್ತವೆ. “ಮಣ್ಣಿನ ವಾಸನೆ ಎಲ್ಲಿ ಇಲ್ಲವೋ ಅಲ್ಲಿ ಜೀವವಿಲ್ಲ . ಮಣ್ಣಿಗೂ ಜೀವಕ್ಕೂ ಅವಿಚ್ಛಿನ್ನ ಸಂಬಂಧ. ಜೀವ ಪ್ರಪಂಚಕ್ಕೆ ಸೇರಿದ ಸಾಹಿತ್ಯದಲ್ಲಿ ಎಂತೆಂಥ ಉದಾತ್ತವಾದ ವಿಚಾರಗಳೂ , ಕಲ್ಪನೆಗಳೂ ಇರಲಿ , ಅಲ್ಲಿ ಈ ಪಾರ್ಥಿವ ಲೋಕದ ವಾಸನೆ ಹೊಡೆಯುತಿದ್ದರೆ ಮಾತ್ರ ಅದು ನಿಜವಾದದ್ದೂ ಸಾರ್ಥಕವಾದದ್ದೂ ಆಗಬಲ್ಲದು” . ಹಾಗಾಗಿ ಮುಂದೆ ಸಿಗರೇಟು , ಸ್ವಿಚ್ಚ್ಚು , ಡಾಕ್ಟರು , ಆಫೀಸು , ರಾಕೆಟ್ಟು  ಮುಂತಾದವು ಕಾವ್ಯದೊಳಗೆ ಸೇರಿಕೊಂಡವು . ಇಂದಿನ ಕಾವ್ಯ ರಚನೆಯಲ್ಲೂ  ಮಣ್ಣಿನ ವಾಸನೆಯನ್ನು ಹೇರಳವಾಗಿ ಕಾಣುತ್ತೇವೆ . ಈ ದೃಷ್ಟಿಯಲ್ಲಿ ನೋಡಿದಾಗ  ಲಂಕೇಶರ ಈ ಮಾತುಗಳನ್ನು ಒಪ್ಪಬಹುದೇನೋ . 

                                                               ಕೋಪಗೊಂಡರೆ ಅದೇ , ವ್ಯಂಗ್ಯವಾದೆ ಅದೇ ,

                                                               ಭೂಮಿ ಆಕಾಶಕ್ಕೆ ಪುಟಿದರೆ ಅದೇ

                                                               ಗೊಡ್ಡಾದರೆ ಅದೇ , ಹೆತ್ತರೆ ಅದೇ,

                                                               ಅದೇ ಅಡಿಗತ್ವ ಹೊಡೆಯುತ್ತದೆ .

                  ಅಡಿಗರ ಕಾವ್ಯವನ್ನು ಸಮಗ್ರವಾಗಿ ಒಪ್ಪಿಕೊಳ್ಳುವುದು ಅವರ ಹೆಚ್ಚಿನ ಕವಿತೆಗಳನ್ನು ಬಹುವಾಗಿ ಪ್ರೀತಿಸುವ ನನಗೆ ಕಷ್ಟ ಸಾಧ್ಯ . ಅವರು ಬತ್ತಲಾರದ ಗಂಗೆ ಮತ್ತು ಚಿಂತಾಮಣಿಯಲ್ಲಿ ಕಂಡ ಮುಖ ಕವನ ಸಂಕಲನದ ಅನೇಕ ಪದ್ಯಗಳ ಕೊನೆಯಲ್ಲಿ ಮರಳಿ ಮರಳಿ ಬರುವ ರಾಜಕೀಯ ಸಿದ್ದಾಂತಕ್ಕೆ ನನ್ನ ಸಹಮತವಾಗಲೀ , ಸಹಾನುಭೂತಿಯಾಗಲೀ ಎರಡೂ ಇಲ್ಲ . ಕಟ್ಟುವೆವು ನಾವು ಹೊಸ ನಾಡೊಂದನು ಎಂದು ಹೊಸ ರಸದ ಬೀಡೊಂದರ ಕನಸ ಕಂಡ ಕವಿ ನೆಹರೂ ಯುಗ ಬಿಟ್ಟು ಹೋದನಿರಾಶೆಗೆ , ತುರ್ತು ಪರಿಸ್ತಿತಿ ತಳ್ಳಿದ ಕರಾಳ ದಿನಗಳ ದಾರುಣತೆಗೆ ವರ್ತಮಾನದ ವ್ಯವಸ್ಥೆಯಲ್ಲಿಯೇ ಪರಿಹಾರ ಕಂಡುಕೊಳ್ಳುವ  ಬದಲು ಮತ್ತದೇ ಹಳೆಯ ಪರಂಪರೆಯನ್ನು ಕನವರಿಸುತ್ತಾ “ಬತ್ತಲಾರದ ಗಂಗೆ” ಕವನದ ಕೊನೆಯಲ್ಲಿ , ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ ಚಿಗುರಿಸುವ ದೃಷ್ಟಿಯೆಡೆಗೆ ಮುಖ ಮಾಡಿದ್ದು ನನಗೂ ಒಪ್ಪಿಗೆಯಾಗುವುದಿಲ್ಲ .  ” ದೆಹಲಿಯಲ್ಲಿ” ಕವನದ ಸಾಲೂಗಳೂ ಕೂಡ ಇದೇ ಧಾಟಿಯಲ್ಲಿವೆ .  

                                                                ಮುಳುಗಿಹೋಗುತ್ತಿರುವ ಪರಂಪರೆಯ ತಿಳಿವನೆತ್ತುವುದು

                                                                ಎತ್ತಿ ಪುರಾತನ ಮಗುವ ಇತ್ತ ಕಡೆ ಕರೆತಂದು

                                                                ಅಂತರಂಗದಲ್ಲಿ ಕಾಪಿಟ್ಟು, ಹೊಸಗಾಳಿಯಲ್ಲಿ

                                                                ಉಸುರುಬಿಟ್ಟು ನಡೆಯುವ ಹಾಗೆ ಆಧುನಿಕಗೊಳಿಸುವುದು

                    ಆದರೆ ಅಡಿಗರ ಕಾವ್ಯದಲ್ಲಿ ಗುರುತಿಸಬಹುದಾದ ಕೆಲವೊಂದು ಪ್ರತಿಗಾಮಿ ಅಂಶಗಳನ್ನು ಮತ್ತು ತುರ್ತು ಪರಿಸ್ಥಿತಿಯ ಹೋರಾಟದ ನಂತರದ ರಾಜಕೀಯ ನಿಲುವನ್ನು ವಿರೋಧಿಸುತ್ತಲೇ ಅವರ ಶ್ರೇಷ್ಠ ರಚನೆಗಳ ಮರುಓದು ಇಂದಿನ ಕಾಲಘಟ್ಟದಲ್ಲಿ ಇಂದಿನ ಅಗತ್ಯವಾಗಿ ಆಗಬೇಕಾದ್ದು . ನಮ್ಮ ತಕರಾರು ಇರಬೇಕಾದದ್ದು ಅಡಿಗರ ಕೆಲವೊಂದು ನಿಲುವುಗಳಿಗೆ ಹೊರತು , ಸಮಗ್ರ ಕಾವ್ಯವನ್ನೇ ತಿರಸ್ಕರಿಸುವ ಮಟ್ಟಕ್ಕಲ್ಲ .  ಉಣ್ಣುವ ಬೆರಳ ಉಗುರಲ್ಲಿ ಕೊಳೆಯಿದೆ ಎಂದು ಉಗುರು ಕತ್ತರಿಸುವ ಬದಲು , ಬೆರಳನ್ನೇ ಕತ್ತರಿಸುವುದಕ್ಕೆ ಅರ್ಥವಿಲ್ಲ .  ಅದಕ್ಕೆ ನನ್ನ ಸಹಮತವೂ ಇಲ್ಲ . ಈ ಹೊಸ ಓದಿನ ಕಾರ್ಯ ಆಗದೆ ಇದ್ದರೆ ನಮ್ಮ ಕಾವ್ಯ ಪರಂಪರೆಯ ಬಹುಮುಖ್ಯ ಕೊಂಡಿಯೊಂದನ್ನು ನಮ್ಮ ಕಾವ್ಯ ಓದಿನಿಂದ ಹೊರಗಿಟ್ಟ ಹಾಗಾಗುತ್ತದೆ . “ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ” ಎಂದು ನನ್ನಂತ ಯುವಪೀಳಿಗೆಯಲ್ಲಿ ಭವಿಷ್ಯದ ಕನಸು ಕಂಡವರನ್ನು ಅವಗಣಿಸಿದಂತಾಗುತ್ತದೆ . ಅಡಿಗರ ಅನೇಕ ಕೃತಿಗಳು ಇಂದಿಗೂ, ಮುಂದಿಗೂ ಪ್ರಸ್ತುತತೆ ಉಳಿಸಿಕೊಂಡಿವೆ. 

                                                                 ಅನ್ನವನು ಕೊಡು ಮೊದಲು; ಬಟ್ಟೆಯನು ಕೊಡು ಉಡಲು;

                                                                 ಕಟ್ಟಿಕೊಡು ಮನೆಗಳನು; ಬಳಿಕ ನೀನು

                                                                 ಕವಿಯಾಗಿ ಬಾ, ನೀತಿವಿದನಾಗಿ ಬಾ, ಶಾಸ್ತ್ರಿ

                                                                 ಯಾಗಿ ಧಾರ್ಮಿಕನಾಗಿ ಮನುಜತೆಯನು

                                                                 ಕಲಿಸು ಬಾ, ಇವನದನು ಕಲಿಯಬಲ್ಲ!

                                                                 ಇದು ಮೊದಲು ಆ ಮೇಲೆ ಉಳಿದುದೆಲ್ಲ!    

                                                                                                                  – ಇದು ಮೊದಲು | ಕಟ್ಟುವೆವು ನಾವು 

                ಅಡಿಗರ ಕಾವ್ಯವನ್ನು ಮರು ಓದಿಗೆ ಒಳಪಡಿಸುವಾಗ ಈಗಾಗಲೇ ವಿಮರ್ಶಕರು ದಾಖಲಿಸುರುವ ವಿಚಾರಗಳು ಪುನಾರಾವರ್ತನೆಯಾಗುವ ಅಪಾಯ ಇದ್ದದ್ದೇ . ಅಡಿಗರ ಕಾವ್ಯದಲ್ಲಿ ಕೂಡ ಪ್ರತಿಮೆಗಳು ಮರು ಮರುಬಳಕೆಯಾಗಿರುವುದರಿಂದ ವಿಮರ್ಶೆಯೂ ಕೂಡ ಅದೇ ದಿಕ್ಕಿನಲ್ಲಿ ಸಾಗುವ ಸಾಧ್ಯತೆಗಳೇ ಹೆಚ್ಚು . ಹಾಗಿದ್ದೂ ಕೊನೆಗೆ ಇನ್ನೂಬಿಟ್ಟು ಹೋಗಿರುವ ಆಯಾಮಗಳನ್ನು ಓದುಗರು ದಕ್ಕಿಸಿಕೊಳ್ಳುವಂತಾದರೆ ಮಾಡಿದ ಕೆಲಸಕ್ಕೂ ಸಾರ್ಥಕ ಭಾವ .  

                  ಈ ನಿಟ್ಟಿನಲ್ಲಿ ನಿರ್ಮತ್ಸರ ಬುದ್ದಿಯಿಂದ , ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಅಡಿಗರ ಕುರಿತಾದ ಭೂತ ಮತ್ತು ವರ್ತಮಾನದ ಧ್ವನಿಯನ್ನು ದಾಖಲಿಸುವ , ವಾದ ಪ್ರತಿವಾದ ,  ತಪ್ಪು ಸರಿಗಳಿಗಿಂತ ಮಿಗಿಲಾಗಿ ಅಡಿಗರ ಕಾವ್ಯದ ಕುರಿತಾದ ಎಲ್ಲರ ಗ್ರಹಿಕೆಯನ್ನು ಗುರುತಿಸುವ  ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ . ಈ ಸಮಯದಲ್ಲಿ ಪಶ್ಚಿಮ ಬಂಗಾಳದ ಸುಪ್ರಸಿದ್ದ  ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ನ ಮಾತುಗಳನ್ನು ಹೇಳಬೇಕು. “As an artist , I have no moral values. I do not see things as good or bad , decent or indecent . I see them only as relevant or irrelevant . I am an observer . My job is to record the reality around me .I only record certain phenomena. So from that point of view , there is nothing profane . I cannot have an attitude towards things.” .

                   ನಾವು ಅಡಿಗರ ನೂರರ ಸಂಭ್ರಮದ ಹೊಸ್ತಿಲಲ್ಲಿರುವಾಗ , ಈ ಮಿಂದಾಣದಲ್ಲಿ ಅಡಿಗರ ಕಾವ್ಯದ ಕುರಿತು ನಿರಂತರ ಚರ್ಚೆಯಾಗಲಿ.  ನಾವು ಸಂಗ್ರಹಿಸಿರುವುದೆಲ್ಲವನ್ನೂ ಒಮ್ಮೆಗೇ ತುಂಬದೆ , ಓದುಗನಿಗೆ ತುಂಬಿದ್ದನ್ನು ಓದಲು ಸಮಯ ಕೊಟ್ಟು, ಹಂತ ಹಂತವಾಗಿ ಉಳಿದದ್ದನ್ನು  ಸೇರಿಸುವ ನಿರ್ಧಾರ ಮಾಡಿದ್ದೇವೆ. ನಿಮಗೆ ಯಾವುದೇ ಮೂಲಗಳಿಂದ ಅಡಿಗರಿಗೆ ಸಂಬಂಧಿಸಿದ ಮಾಹಿತಿ , ವಸ್ತು ಲಭ್ಯವಾದಲ್ಲಿ ಅಥವಾ  ಸಲಹೆಗಳಿದ್ದರೆ ಅದನ್ನು angala.sankathana@gmail.com ಗೆ ಈಮೇಲ್ ಮಾಡಿ . ಈ ಯೋಜನೆಗೆ ನಮಗೆ ಹಲವು ರೀತಿಯ ಸಹಾಯದ ಅಗತ್ಯವಿದೆ. ಅದನ್ನು ವಿವರವಾಗಿ “ಯೋಜನೆಗೆ ನೇರವಾಗಿ” ಪುಟದಲ್ಲಿ ನಮೂದಿಸಿದ್ದೇವೆ. ಇಂದು ನಮ್ಮ ಕೆಲವೇ ಲೇಖಕರ ಕೃತಿಗಳು, ವಿಮರ್ಶೆಗಳು ನಮಗೆ ಅಂತರ್ಜಾಲದಲ್ಲಿ ದೊರಕುತ್ತಿದೆ . ಅದನ್ನು ವೃದ್ಧಿಸುವ ಬಯಕೆ ನಮ್ಮದು . ಮುಂದೆ ಸಾಧ್ಯವಾದಷ್ಟು ಬರಹಗಾರರ ದಾಖಲೀಕರಣ ಮಾಡುವ ಯೋಚನೆಯಿದೆ. ಮುಕ್ತ , ಆಸಕ್ತ ಮನಸ್ಸುಗಳ ಸಹಕಾರದೊಂದಿಗೆ ಅರಿವಿನ ಹರಿವನ್ನು  ನಿರಂತರವಾಗಿಡಲು ಪ್ರಯತ್ನಿಸುತ್ತೇವೆ.  

ಹಬ್ಬಿ ನಗಲಿ ಪ್ರೀತಿ !

ಈ ಯೋಜನೆಗೆ ನೆರವಾಗಿ